ನಿಮ್ಮ ಕಣ್ಣೀರಿಗಿಂತ ತಂದೆ ತಾಯಿಯ ಕಣ್ಣೀರು ದೊಡ್ಡದು: ವಿದ್ಯಾರ್ಥಿನಿಯರಿಗೆ ನ್ಯಾಯಾಧೀಶರ ಕಿವಿಮಾತು
ಚಿಂತಾಮಣಿ: “ನೀವಂದುಕೊಳ್ಳುತ್ತೀರಿ, ನಮ್ಮನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು. ಆದರೆ ನೀವು ಮಾಡುವ ಒಂದು ತಪ್ಪಿನಿಂದ ನಿಮ್ಮ ತಂದೆ ತಾಯಿಯ ಕಣ್ಣೀರಿನಲ್ಲಿ ಕೈ ತೊಳೆಯಬೇಕಾಗುತ್ತದೆ. ನಿಮ್ಮ ಕಣ್ಣೀರಿಗಿಂತ ಅವರ ಕಣ್ಣೀರು ತುಂಬಾ ದೊಡ್ಡದು” ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಗೀತಾಂಜಲಿ ಜಿ. ಅವರು ವಿದ್ಯಾರ್ಥಿನಿಯರಿಗೆ ಹೃದಯಸ್ಪರ್ಶಿ ಕಿವಿಮಾತು ಹೇಳಿದರು.
ಶಿಕ್ಷಣ, ಸುರಕ್ಷತೆ ಮತ್ತು ಜವಾಬ್ದಾರಿಯ ಅರಿವು
ಚಿಂತಾಮಣಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಹೊರಗಡೆ ಒಂಟಿಯಾಗಿ ಹೋಗುವಾಗ ಎಚ್ಚರಿಕೆಯಿಂದ ಇರಬೇಕು. ತಮ್ಮೊಂದಿಗೆ ಹೋಗುವ ವ್ಯಕ್ತಿ ನಂಬಿಕೆಗೆ ಅರ್ಹನೇ? ಯಾವುದೇ ಅಪಾಯಕಾರಿ ಪರಿಸ್ಥಿತಿ ಎದುರಾದರೆ ನೆರವಾಗುವ ಸಾಮರ್ಥ್ಯ ಆತನಿಗಿದೆಯೇ? ಎಂಬುದನ್ನು ಯೋಚಿಸಬೇಕು ಎಂದು ಸಲಹೆ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಪೋಷಕರ ನೋವನ್ನು ಅರ್ಥಮಾಡಿಕೊಳ್ಳಿ
ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿರುವುದು ಕೇವಲ ಅವರ ವೈಯಕ್ತಿಕ ಪ್ರಯತ್ನದಿಂದಲ್ಲ; ಅವರ ಹಿಂದೆ ಇಡೀ ಕುಟುಂಬದ ಬೆಂಬಲವಿದೆ ಎಂದು ನ್ಯಾಯಾಧೀಶರು ನೆನಪಿಸಿದರು.
ಮಕ್ಕಳು ತಪ್ಪು ಮಾಡಿದಾಗ ಸಮಾಜ ಅವರನ್ನು ಮಕ್ಕಳೆಂದು ಪರಿಗಣಿಸಿ ಸುಮ್ಮನಾಗಬಹುದು. ಆದರೆ ಅವರ ತಂದೆ ತಾಯಿಯರು ಸಮಾಜದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪೋಷಕರು ನ್ಯಾಯಾಲಯಕ್ಕೆ ಬಂದು ಕಣ್ಣೀರು ಹಾಕುವಾಗ ಅವರ ನೋವು ಎಷ್ಟು ಆಳವಾಗಿದೆ ಎಂಬುದು ಅರ್ಥವಾಗುತ್ತದೆ ಎಂದು ಭಾವುಕರಾಗಿ ತಿಳಿಸಿದರು.
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ
ಇತ್ತೀಚೆಗೆ ಶಿರಾದಲ್ಲಿ ತಾಯಿ ಬೈದರು ಎಂಬ ಕಾರಣಕ್ಕೆ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ ಎಂದರು.
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಪ್ರತಿಯೊಬ್ಬರ ಜೀವನಕ್ಕೂ ಒಂದು ಉದ್ದೇಶವಿದೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ತಿಳಿಸಿದರು.
ಮಾನಸಿಕ ಆರೋಗ್ಯ ಕಾಯ್ದೆಯಡಿ ಉಚಿತ ಚಿಕಿತ್ಸೆಯ ಸೌಲಭ್ಯ
ಮಾನಸಿಕ ಆರೋಗ್ಯ ಕಾಯ್ದೆಯ ಕುರಿತು ಮಾಹಿತಿ ನೀಡಿದ ನ್ಯಾಯಾಧೀಶೆ ಗೀತಾಂಜಲಿ ಜಿ. ಅವರು, ಈವರೆಗೆ 104 ಪ್ರಕರಣಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದರು.
ಮನೆಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿದ್ದರೆ ಕುಟುಂಬದ ಸದಸ್ಯರು ಮಾತ್ರವಲ್ಲದೆ ಇತರರೂ ಅರ್ಜಿ ಸಲ್ಲಿಸಬಹುದು. ಅಂತಹ ವ್ಯಕ್ತಿಗಳನ್ನು ನಿಮ್ಹಾನ್ಸ್ ಹಾಗೂ ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಉಚಿತ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯಿದೆ ಎಂದು ವಿವರಿಸಿದರು.
ತಾವು ಕಳುಹಿಸಿದ್ದ ಮೂರುರಿಂದ ನಾಲ್ಕು ಪ್ರಕರಣಗಳಲ್ಲಿನ ವ್ಯಕ್ತಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದಾರೆ ಎಂದರು. ರಸ್ತೆಬದಿಯಲ್ಲಿ ಅಲೆದಾಡುವ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನೂ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಊರಿನಲ್ಲಿ ಇಂತಹ ವ್ಯಕ್ತಿಗಳು ಕಂಡುಬಂದರೆ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಮಾಹಿತಿ ನೀಡುವ ಮೂಲಕ ಸಮಾಜಕ್ಕೆ ನೆರವಾಗಬಹುದು ಎಂದು ಕರೆ ನೀಡಿದರು.
ಮಹಿಳೆಯರಿಗೆ ಉಚಿತ ಕಾನೂನು ನೆರವು
ಹೆಣ್ಣುಮಕ್ಕಳು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉಚಿತ ಕಾನೂನು ನೆರವು ಲಭ್ಯವಿದ್ದು, ಅರ್ಹರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಉಪಾಧ್ಯಕ್ಷ ಶ್ರೀನಾಥ್ ಬಾಬು, ಕಾರ್ಯದರ್ಶಿ ಕಿರಣ್, ಆರೋಗ್ಯ ಅಧಿಕಾರಿ ರಾಮಚಂದ್ರರೆಡ್ಡಿ, ಬಿಇಒ ನಾರಾಯಣಸ್ವಾಮಿ, ವಕೀಲ ರಾಜಾರಾಮ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂತಹ ಇನ್ನಷ್ಟು ಸ್ಥಳೀಯ ಸುದ್ದಿಗಳು, ಶಿಕ್ಷಣ, ಸಮಾಜ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಗಾಗಿ ಸಂಚಲನ ನ್ಯೂಸ್ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ.
